Saturday, February 25, 2012

ಅಂಬೆಗಾಲು


   ಬದುಕೆಂಬುದು ಸುಂದರ. ತೊದಲು ಮಾತಾಡುತ್ತಾ ಇದನ್ನು ಪ್ರಾರಂಭಿಸುವ ನಾವು ಶಾಶ್ವತವಾದ ಮೌನದ ಕಡೆಗೆ ಸಾಗುತ್ತಿರುತ್ತೇವೆ. ನಮ್ಮ ಜೀವನವೆಂಬುದು ಒಂದು ತರಹದ ಡೌನ್-ಕೌಂಟರ್ ಇದ್ದಂತೆ. ಮೊದಲೇ 'ಇಂತಿಷ್ಟು' ಸಮಯ ಎಂಬುದು ನಿರ್ಧಿಷ್ಟವಾಗಿದ್ದರೂ, ನಾವು ಒಂದು, ಎರಡು, ಮೂರು... ವರುಷಗಳೆಂದು ಲೆಕ್ಕ ಹಾಕುತ್ತೇವೆ. ಬದಲಾಗಿ ಇದನ್ನೇ, ಎಪ್ಪತ್ತು, ಅರವತ್ತೊಂಬತ್ತು, ಅರವತ್ತೆಂಟು... ವರುಷಗಳು ಬಾಕಿ ಉಳಿದಿವೆ ಎನ್ನುತ್ತಾ ಲೆಕ್ಕಿಸಿಬಹುದೇನೊ... 

     ಈ ಎರಡು ಕೊನೆಗಳ ನಡುವಲ್ಲಿ: ಅವೆಷ್ಟೋ ಸಂತಸಗಳು, ಅವೆಷ್ಟೋ ದುಃಖಗಳು, ಅವೆಷ್ಟೋ ನೆನಪುಗಳು, ಸಾಧನೆಗಳು, ವಿಫಲತೆಗಳು, ಮತ್ತೆ ಮೇಲೆದ್ದು ಬರುವ ಪ್ರಯತ್ನಗಳು, ಹಂಬಲಗಳು, ಬದುಕಿನ ಆಸೆಗಳು, ಬಯಕೆಗಳು, ಕನಸುಗಳು, ಬದುಕ ತಿರುವುಗಳು, ಹಾದಿ ಬದಿಯ ನಿಲ್ದಾಣಗಳು, ಒಮ್ಮೆ ಜೊತೆಗೂಡುವ ಸಂಗಾತಿ, ಕೈ ಹಿಡಿದು ನಡೆಸಿದಷ್ಟೂ ಖುಷಿ ಪಡುವ ಕಂದಮ್ಮಗಳು, ಮತ್ತದೇ ಓಟ ಮತ್ತದೇ ಜೀವನ.

     ಆದರೆ ಈ ಒಂದು ರಂಗಮಂಚದಲ್ಲಿ ನಟಿಸಲೇ ಬೇಕಲ್ಲ?! ನಿರ್ದೇಶಕ ನಿರ್ದೇಶಿಸಿದಂತೆ ಅಭಿನಯಿಸಿದರೆ ಆಯಿತು ಎಂದು ಸುಮ್ಮನಿರಲಾದೀತೆ? ನಮ್ಮ ಭಾವಾವೇಶಗಳು, ನಮ್ಮ ಭಾವನೆಗಳು, ನಮ್ಮ ಕೋಪ, ರೌದ್ರ, ಶೃಂಗಾರ, ಪ್ರೇಮ, ಶಾಂತ, ಸಂತಸದ ರಸಗಳನ್ನು ನಾವು ತೋರ್ಪಡಿಸಬೇಕಲ್ಲವೆ? ನಮ್ಮ ಪ್ರಯತ್ನವಿಲ್ಲದೇ ಹಾಗೇ ಇದ್ದರಾದೀತೆ?... ಅದೇ ಅನಿವಾರ್ಯತೆ. 

    ಇಷ್ಟೆಲ್ಲ ಕೆಲಸಕ್ಕೆ ಬಾರದ! ಆಲೋಚನೆಗಳು ನನ್ನ ಚಿತ್ತಭಿತ್ತಿಯಲ್ಲಿ ಓಡಾಡುತ್ತಿರುವಾಗ ಗರಿಗೆದರಿದ ಪುಟ್ಟ ಕನಸು ಬ್ಲಾಗ್. ಬಹುಶಃ ಇದು ಈಗ್ಗೆ ಮೂರು-ನಾಲ್ಕು ವರ್ಷಗಳದ್ದು. ನಾನೇಕೆ ಬರೆಯಬಾರದು? ಎಂಬ ತುಮುಲಗಳ ನಡುವೆಯೇ ಆಸೆ ಮೂಡಿತ್ತು. ಈ ಆಸೆಯ ಒತ್ತಡವನ್ನು ತಡೆದೂ ತಡೆದು, ಗಜಗರ್ಭವಾಗಿ ಅಂತೂ ಈ ಬ್ಲಾಗಿಗೆ ಜನ್ಮವಿತ್ತೆ. ಇದು ನನ್ನ ಕನಸುಗಳ 'ಮೊದಲಿನ ಕೂಸು', ಪುಟ್ಟದ್ದು, ಅಂಬೆಗಾಲನ್ನು ಇಡುತ್ತಿದೆ.

    ಮುಂದಿನ 'ನೌಕರಿ' ಎಂಬ ಜೀವನದಲ್ಲಿ 'ಕಾರ್ಪೊರೇಟ್' ಜಗತ್ತಲ್ಲಿ ಕಳೆದು ಹೋಗುತ್ತೇನೆಯೋ ನಾನು, ಎಂಬ ಭಯದಿಂದ ಈಗಲೆ ಜನ್ಮವಿತ್ತೆ. ಇದಾದರೂ ನನ್ನನ್ನು ಕ್ರಿಯಾಶೀಲನನ್ನಾಗಿರಿಸೀತೆಂಬ ಆಶಯ. ಪುಟ್ಟ ಭರವಸೆ. ನಿಮ್ಮ ಓದು, ನಿಮ್ಮ ಹಾರೈಕೆ, ನಿಮ್ಮ ಅನಿಸಿಕೆ... ನನ್ನ ಇರುವಿಕೆ.

    ಒಂದು ನಿಮಿಷ, ಹುಚ್ಚು ಮನ - ಹತ್ತಾರು ಪುಟಗಳು ಎಂಬ ಹೆಸರೇಕೆ? ಏನಿಲ್ಲ. ಇವತ್ತು ಪ್ರೀತಿ-ಪ್ರೇಮ-ಪ್ರಣಯ ಎನ್ನುತ್ತಿದ್ದರೆ ನಾಳೆ ರಾಜಕೀಯ, ಜನರು, ಜಗತ್ತು ಅಂತೆಲ್ಲ ಬರೆಯುತ್ತೇನೆ. ಏಕೆಂದರೆ ನಮ್ಮದು ಹುಚ್ಚು ಮನ ಅದರೊಳಗೆ ಹತ್ತಾರು ಪುಟಗಳು.

 ನಿಮ್ಮ ಓದು, ನನ್ನ ಇರುವು.