ಒಂದಂತೂ ನಿಜ, ರಾಬಿನ್ ಶರ್ಮಾ ಹೇಳಿದಂತೆ, ಯಾವಾಗ ನಾವು ಒಂದು ಶಾಂತವಾದ ಪರಿಸರದಲ್ಲಿ ಏಕಾಂಗಿಯಾಗಿ ಕುಳಿತಿರುತ್ತೇವೋ,ಆಗ ಮನಸ್ಸು ತುಂಬಾ ಹಗುರವೆನಿಸುತ್ತದೆ. ಬಹಳಷ್ಟು ವೇಳೆ ಇಲ್ಲ ಸಲ್ಲದ ಆಲೋಚನೆಗಳು ನಮ್ಮ ಮನಸ್ಸನ್ನು ಹೊಕ್ಕಿ ಹೊರಬಿದ್ದು ಮತ್ತೆಲ್ಲೋ ಹೋಗಿ ಸೇರಿಬಿಡುತ್ತವೆ.ಅವಕ್ಕೆ ಗೊತ್ತು ಗುರಿಗಳಿಲ್ಲ. ಅವು ಎಲ್ಲಿ ಹುಟ್ಟಿಕೊಳ್ಳುತ್ತವೋ ತಿಳಿಯದು. ಒಂದಷ್ಟು ಕಠಿಣ ನಿರ್ಧಾರಗಳು ಇರಲೇಬೇಕು. ವಾಹಿನಿಯೊಂದು ಹರಿಯುವುದು ಅದರನ್ನು ಅವಲಂಬಿಸಿಯೇ. ಬಹಳಷ್ಟು ಚಿಕ್ಕ ಬದಲಾವಣೆಗಳು ಅಪರಿಮಿತ ಯಶಸ್ಸನ್ನು ತಂದುಕೊಡುವುದು.
ನಿಜ ಹೇಳಬೇಕೆಂದರೆ, ಕೆಲಸವೆಂಬುದು ಇಲ್ಲದಿದ್ದರೇನೆ, ಈ ತಲೆ ಎನ್ನುವುದು ಹತ್ತುಹಲವು ಆಲೋಚಿಸಿ ಗೊಬ್ಬರವಾಗಿಬಿಡುವುದು. ಇಲ್ಲಿ ಬಂದಮೇಲೆ ಕೆಲಸ ಮಾಡಲೇಬೇಕು. ನಾವೊಂದು ಇರುವೆಯಿರಲಿ, ಜೇನುನೊಣವಿರಲಿ ಅಥವಾ ಹಿಮಾಲಯದ ತಪ್ಪಲುಗಳಲ್ಲಿ ಕುಳಿತು ಧ್ಯಾನಿಸುತ್ತಿರುವ ಸಾಧು ಸಂತರಿರಲಿ, ನಮ್ಮನ್ನು ಒಂದಲ್ಲ ಒಂದರಲ್ಲಿ ತೊಡಗಿಸಿಕೊಂಡಿರಲೇಬೇಕು. ಆಲಸ್ಯವೆಂಬುದನ್ನು ಗೆಲ್ಲಲೇಬೇಕು. ಶರ್ಮಾ ಅವರು ಹೇಳಿದಂತೆ, ಆಲಸ್ಯವೆಂಬುದು ಸುಮೊ ಕುಸ್ತಿ ಪಟುವೊಬ್ಬ ಒಂದು ಆವಾಸದಲ್ಲಿ ಅಡಗಿ ಬಾಗಿಲಲ್ಲಿ ಹೆಬ್ಬಂಡೆಯೊಂದನ್ನು ಹಾಕಿಕೊಂಡಂತೆ. ಅದರಾಚೆಗಿನ ಉದ್ಯಾನವನದಲ್ಲಿ ಅರಳುತ್ತಿರುವ ಹೂವುಗಳ ಸೌಂದರ್ಯವನ್ನು ಆತ ಸವಿಯಲಾರ. ಅಲ್ಲಿ ಆಡುತ್ತಿರುವ ಮಕ್ಕಳ ಸಂತಸವನ್ನು ಅನುಭವಿಸಲಾರ. ಹೊರಗಿನ ಸೂರ್ಯೋದಯ, ಸೂರ್ಯಾಸ್ತದ ಹಿತವನ್ನು ಪಡೆಯಲಾರ. ಆದ್ದರಿಂದ ಆ ಹೆಬ್ಬಂಡೆಯೊಂದನ್ನು ಉರುಳಿಸಿ ಬದಿಗೊತ್ತುವುದು ಒಳಿತು. ನಾನೂ ನಿಮ್ಮ ಜೊತೆ ಪ್ರಯತ್ನಿಸುವೆ. 'The Monk Who Sold His Ferrari by Robin Sharma' ಖಂಡಿತ ಓದಲೇಬೇಕಾದ ಪುಸ್ತಕ.
ಇತಿಹಾಸದಲ್ಲಿ, ನಾವು ಯಾವತ್ತೂ, ಪಂಗಡಗಳ ನಡುವೆ, ಧರ್ಮೀಯರ ನಡುವೆ, ಜ್ಞಾನ ಹಾಗೂ ಧರ್ಮಾಂಧತೆಯ ನಡುವೆ, ಸಾಂಪ್ರದಾಯಕತ್ವ ಹಾಗೂ ಆಧುನಿಕತೆಗಳ ನಡುವೆ ಯುದ್ಧವನ್ನು ಗಮನಿಸಿದ್ದೇವೆ. ಸತ್ಯವೇನು ಎನ್ನುವ ಕುತೂಹಲ ಎಲ್ಲರಿಗೂ ಬರುವಂತದ್ದೆ. ವಿಜ್ಞಾನವಿರಲಿ, ಧರ್ಮವಿರಲಿ ಅದರ ಮೂಲತತ್ವ ಸತ್ಯದ ಪರಿಶೋಧ. ಜನರ ಜೀವನ ಮಟ್ಟವನ್ನು ಮೇಲೆತ್ತುವುದು ಅದರ ಗುರಿ. ನೀವು ಇತಿಹಾಸದಲ್ಲಿ ಆಸಕ್ತಿಯುಳ್ಳವರಾಗಿದ್ದರೆ ಅಥವಾ ಬರಹಗಾರರೊಬ್ಬರ ಅಧ್ಬುತ ಸಾಮರ್ಥ್ಯವನ್ನು ಆಸ್ವಾದಿಸಬೇಕು ಎನ್ನುವುದಿದ್ದರೆ ಅಥವಾ ಯಾವುದೇ ಓರೆ ಪ್ರಭಾವಕ್ಕೆ ಒಳಗಾಗದೆ, ಇದು ಹೀಗೆ - ಇದು ಹೀಗೆ ಎನ್ನುವಂತಹ ಹಾಗೂ ಕನ್ನಡದ ಬರವಣಿಗೆ ಬೇಕು ಎನ್ನುವುದಾದರೆ 'ಎಸ್. ಎಲ್. ಭೈರಪ್ಪನವರ ಆವರಣವನ್ನು' ಓದಿ.
ಕೆಲವೊಂದು ಬರಹಗಾರರಿರುತ್ತಾರೆ. ಅವರ ಆಲೋಚನೆಗಳೆಂಬುದು ಪ್ರೌಢಿಮೆಯಿಂದ ಕೂಡಿದ್ದು, ಸರಳವಾದದ್ದು, ಹಿತವನ್ನು ಕೊಡುವಂತದ್ದು. ಹಾಗೆಯೇ ಓದುತ್ತಿದ್ದರೆ, ನಮ್ಮ ಪಕ್ಕದಲ್ಲೇ ಕುಳಿತು ನಮಗೊಂದು ಸಂತೃಪ್ತಿಯನ್ನು, ಆಪ್ತತೆಯನ್ನು, ಪ್ರೀತಿಯನ್ನು ತುಂಬುತ್ತದೆ. ಅಂತಹ ಪುಸ್ತಕ, 'The Alchemist by Paulo Coelho'. ಅದೊಂದು ನಮ್ಮದೇ ಮನೆಯಜ್ಜನ ಅಕ್ಕರೆ, ವಾತ್ಸಲ್ಯ ಹಾಗೂ ತತ್ವಶಾಸ್ತ್ರವೇ ಸರಿ. ಅಲ್ಲೊಂದು ಆನಂದವಿದೆ, ನಮಗೊಂದು ಹಿತವಿದೆ. ಸರಿ, ಎಲ್ಲಿಂದಲೋ ಆರಂಭಿಸಿ, ಎಲ್ಲೋ ಹೋಗಿ ತಲುಪಿದ್ದೇನೆ! ಮತ್ತೆ ಸಿಗೋಣ. ಅಲ್ಲಿ ತನಕ ಈ ಪುಸ್ತಕಗಳು ನಿಮಗಾಗಿ.