Saturday, August 11, 2012

ಸಂದೇಶಪ್ರತಿಸಂದೇಶ


moon and the breeze
ಪ್ರಿಯೆ,
ನಿನ್ನ ಬರುವಿಕೆಗೆ ಇಂದು ನಾ ಕಾದಿರುವೆ
ಬರುವೆಯಾ? ಬಿಡುವೆಯಾ? ಎಂಬ ತೊಳಲಾಟ ಎನಗೆ.
ಮನಸ್ಸಿಂದು ನಾಲ್ಕು ಗೋಡೆಗಳ ಮಧ್ಯೆ ಸಿಲುಕಿದೆ
ಸ್ವಚ್ಛಂದ ಹಾರಾಟದ ಲಹರಿ ಕಾಣದೆ.

ನನ್ನ ಕನಸುಗಳ ಮೆರವಣಿಗೆ ನಡೆದಿದೆ
ನಿನ್ನ ರಥದಲ್ಲಿ ಕುಳಿಸಿಕೊಂಡು.
ಮನವು ಮುದಗೊಂಡು ನಿನ್ನ ಬಯಸುತಿದೆ
ಸೇರುವೆ ನಿನ್ನ ಒಲುಮೆಗಳೊಳಕ್ಕೆ.

ಹಸಿರ ಹಾಸಿನ ಮೇಲೆ ಕುಣಿದಾಡುವಾಸೆ
ನಿನ್ನ ಜೊತೆ ಸೇರಿ ಪಡೆಯಬೇಕೆಂಬ ನಿರಾಳತೆ.
ನನ್ನ ನಾ ಹರಿಬಿಟ್ಟಿರುವೆ ಸಲಿಲದಂತೆ
ನೀನೆಂಬ ಇಳೆಗೆ ತಂಪ ನೀಡುವಂತೆ

ಬೀಸುವ ಮಂದ ಮಾರುತವು ಸ್ಪರ್ಶಿಸಿದೆ
ತಂಪೆನಿಸಿದರೂ ನಾ ಪುಳಕಗೊಂಡಿರುವೆ.
ಹುಣ್ಣಿಮೆಯ ರಾತ್ರಿಯಲಿ ಎದ್ದಿರುವೆ ಬೆಳಕಲ್ಲಿ
ಬರುವೆಯಾ ನೀ ಎನ್ನ ಬಳಿಗೆ?

ಪ್ರಿಯಾ,
ನಿನ್ನ ಸಾಲುಗಳಲ್ಲಿ ನನ್ನ ಜೀವವಿದೆ
ಬರದಿರಲಾರೆನೆ ನಾ ನಿನ್ನ ಬಳಿಗೆ?
ನನ್ನ ಮನಸ್ಸಿಂದು ನಿನ್ನ ಬೇಡುತಿದೆ
ಸ್ವಚ್ಛಂದದ ಲಹರಿಯಲ್ಲಿ ನೀನೇ ನನ್ನಲ್ಲಿರುವೆ.

ನನ್ನ ಕನಸುಗಳ ಇರುವೆಲ್ಲ ನಿನ್ನಲ್ಲಿವೆ
ಸಾಕಾರಗೊಳಿಸುವೆಯಾ ನೀ ನನಗೆ?
ಮನದ ಭಾವಗಳು ತಟ್ಟನೆ ನೆನಪಿಸಿವೆ
ನನ್ನ ಒಲುಮೆಗಳೆಲ್ಲ ನಿನ್ನ ಮುದಕ್ಕೆ.

ನೀ ಕುಣಿದಾಡುವ ಹಸಿರಹಾಸಮೇಲೆ ಕಾದಿರುವೆ
ಪಾಲುದಾರಳಾಗಬೇಕೆಂಬುದು ನಿನ್ನ ನಿರಾಳತೆಗೆ.
ನಿನ್ನ ಸಲಿಲವನು ನಾನು ಕಾಯ್ದಿಡುವೆ
ನನ್ನ ಆಕಾಂಕ್ಷೆಗಳಿಗೆ ನಿನ್ನದೇ ಬಯಕೆ.

ಪ್ರತಿ ಮಾರುತದಲ್ಲೂ ಕಳಿಸಿರುವೆ ಸ್ಪರ್ಶವನು
ನಿನ್ನ ಪುಳಕಗಳೆಲ್ಲ ನನ್ನ ಇರುವಿಕೆಗೆ.
ಹುಣ್ಣಿಮೆಯ ರಾತ್ರಿಯಲಿ ಸೇರಿಹರು ಕೃಷ್ಣ-ರಾಧೆಯರು
ಬಂದಾಗ ಯಮುನಾ ತೀರದ ಬಳಿಗೆ.

Wednesday, June 20, 2012

ನಾನು ಮತ್ತು ನನ್ನದೆಂಬ ಅಹಮಿಕೆಯೂ

Following the footsteps of dad
  ಎಷ್ಟೋ ಮಥಿತ ಭಾವಗಳ ನಡುವೆ ಹೊಳಹು ಕಂಡಿದ್ದು ಒಂದೆ. ನಾನೇನಾಗಬೇಕು? ಎಂಬ ಪ್ರಶ್ನೆಗೆ ಉತ್ತರ ಹುಡುಕಿ ಗುರಿಯನ್ನು ರೂಪಿಸತೊಡಗಿದ್ದೆ. ನನ್ನ ಆದರ್ಶಗಳು ನನಗೆ ಮುಳುವಾಗುತ್ತಿವೆ ಎಂಬ ಭಯವು ಕಾಡುತ್ತಿದೆ. ಆದರೆ ಮನದಲ್ಲಿ ಸುಪ್ತ ಭಾವವೊಂದು ಹೇಳುತ್ತಿದೆ - ಆದರ್ಶಗಳ ಪಾಲನೆ ಕಷ್ಟ ನಿಜ, ಆದರೆ ಗೆಲುವು ನಿಶ್ಚಿತ. ಮನಸ್ಸು ಮತ್ತು ಮೆದುಳಿನ ನಡುವೆ ಯಾವುದೋ ಒಂದು filter ಇದೆ ಎಂದು ಭಾಸವಾಗುವುದು ನನಗೆ. ಏಕೆಂದರೆ ಮನಸ್ಸಿನ ಸತ್ಯವನ್ನು ಅದು ನನಗೆ ಹೇಳ ಬಿಡುತ್ತಿಲ್ಲ. ಎಲ್ಲೋ ಕೆಲವೊಮ್ಮೆ ಹಾಳು ವಿವೇಕವೊಂದು ವಿವೇಚಿಸುತ್ತಾ ನನ್ನನ್ನು ಅಧೀರನನ್ನಾಗಿಸುತ್ತದೆ.

  ಒಮ್ಮೊಮ್ಮೆ ಅನಿಸುವುದು ಯಾರಾದರ ಹತ್ತಿರ ಎಲ್ಲವನ್ನೂ ತೋಡಿಕೊಳ್ಳಲೆ? ನನ್ನ ದ್ವಂದ್ವ ನನ್ನ ತುಮುಲಗಳನ್ನು, ನನ್ನ ವಿಚಾರಗಳನ್ನು, ನನ್ನ ಕನಸುಗಳನ್ನು ಎಂದು. ಒಮ್ಮೆ ಅಪ್ಪ, ಒಮ್ಮೆ ಆಯಿ, ಒಮ್ಮೆ ಅಣ್ಣ, ಇನ್ನೊಮ್ಮೆ mentor , ಇನ್ನೊಮ್ಮೆ my friend ಎಲ್ಲ ನೆನಪಾಗುತ್ತಾರೆ. ಆದರೆ ಇವರ್‍ಯಾರ ಹತ್ತಿರವೂ ಬೇಡ ಎಂದು ಸುಮ್ಮನಿದ್ದುಬಿಡುತ್ತೇನೆ. ಎಷ್ಟೋ ಸಲ ನನ್ನ ಬರಹಗಳಲ್ಲಿ ಅವನ್ನೆಲ್ಲ ಅಡಗಿಸಿಟ್ಟಿರುತ್ತೇನೆ. ಇದರಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿ. ಎಷ್ಟೋ ಸಲ ಅದರ ಕುರಿತು ತುಂಬಾ ಅಲೋಚಿಸುತ್ತೇನೆ. ಕೊನೆಯಲ್ಲಿ ಇಂಗ್ಲಿಷಿನ If you want to learn swimming, then it is better to jump into the river than reading hundreds of books on swimming ಅನ್ನೊ ಮಾತು ನೆನಪಾಗಿ ಸುಮ್ಮನಿದ್ದುಬಿಡುತ್ತೇನೆ. If you want to do it, do it. If you want to say it, say it.

  ಒಂದು ನಿರ್ಧಾರಕ್ಕೆ ಬಂದಿರುವೆ. ಅಪ್ಪನ ಆದರ್ಶಗಳನ್ನು ಪಾಲಿಸೋದು. ಆತ ಹೇಳುತ್ತಾ ಇರುತ್ತಾನೆ ನಮ್ಮಲ್ಲಿ (ಅಣ್ಣ ಮತ್ತು ನಾನು), ಯಾವತ್ತೂ ಇನ್ನೊಬ್ಬರಿಗೆ ತೊಂದರೆಯಾಗದಂತೆ ನಡೆದುಕೊಳ್ಳಿ, ನಮ್ಮಿಂದಾಗಿ ಇತರರಿಗೆ ನೋವಾಗಬಾರದು. ನಿಮ್ಮ ಪಾಲಿನ ಕೆಲಸವನ್ನು ನೀವು ಮಾಡಿ. ಅವರು ಇವತ್ತಿಗೂ ಪಾಲಿಸಿದ್ದಾರೆ. So ನಾನೂ ಕೂಡ ಅವರ ಹಾದಿಯಲ್ಲೆ ಹೆಜ್ಜೆ ಇಡಬೇಕು.

  ಜೀವನದಲ್ಲಿ ನಿಮ್ಮ ಕನಸುಗಳ ಸಾಕಾರಕ್ಕಾಗಿ ದುಡಿಯಿರಿ ಎಂದು Randy Pausch ಹೇಳುತ್ತಾನೆ, ತನ್ನ The Last Lecture ಅಲ್ಲಿ. ಕೆಲವೊಮ್ಮೆ ನನಗೆ ಅನಿಸುವುದು, In Life everyone will not be lucky to start their life with chasing their dreams. They have to compromise at some point and then they have to start ಅಂತ.

  ಹಣ ಎಂಬುದು ಜೀವನದ ಅವಶ್ಯಕತೆ ತಾನೆ? ನಾವೇನೂ ವಿರಾಗಿಗಳಲ್ವಲ್ಲ, ಹಣ ನಶ್ವರ ಎನ್ನೋಕೆ? ಶ್ರೀಮಂತರಾದವರು ಹಣದ ಬಗ್ಗೆ ತತ್ವದ ಮಾತುಗಳನ್ನು ಹೇಳಬಹುದು. ಆದರೆ ಬಡವರಿಗೆ ಹಣ ನೆಮ್ಮದಿಯೆ ತಾನೆ? ಅದು ಬದುಕಿನ ವಾಸ್ತವ ಹಾಗೂ ವಿಪರ್‍ಯಾಸ. ಆದರೆ ನಾವು ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ಸಂಗತಿ ಎಂದರೆ,  "Money is a bad master and a good slave".  ಅದಕ್ಕಿಂತ ಹೆಚ್ಚಿನ ಯಾವ ಸ್ಥಾನವನ್ನೂ ಹಣಕ್ಕೆ ಕೊಡಲು ಸಾಧ್ಯವಿಲ್ಲ.  So ಮೊದಲು ಒಂದಿಷ್ಟು ಹಣ ಕೂಡಿಟ್ಟು ನಂತರ ನನ್ನ ಕನಸುಗಳ ಸಾಕಾರಕ್ಕಾಗಿ ದುಡಿಯಬೇಕು. ನೆಮ್ಮದಿಯ ಜೀವನವನ್ನು ಅನುಭವಿಸಬೇಕು. ಹೇಗೆಂದರೂ ನಮ್ಮ ಜೊತೆ ಅಪ್ಪನೋ, ಅಮ್ಮನೋ, ಸಹೋದರ/ರಿಯೋ, ಪತಿಯೋ/ಪತ್ನಿಯೋ, ಆಪ್ತ ಗೆಳೆಯನೋ/ಗೆಳತಿಯೋ ಅಥವಾ ಇನ್ಯಾರೋ ಇರುತ್ತಾರಲ್ಲ. ಒಮ್ಮೆ ಇವರ್‍ಯಾರೂ ಇಲ್ಲ ಎಂದಿಟ್ಟುಕೊಳ್ಳಿ ( ಯಾರೂ ಇಲ್ಲದಿರುವುದು ಒಮ್ಮೊಮ್ಮೆ ವಾಸ್ತವವೆ ) "ನಮ್ಮದಕ್ಕೆ ನಾವೇ ಇದ್ದೀವಲ್ಲ" ಅಲ್ವಾ? Accept the life as it comes. Share Love.


Thursday, June 7, 2012

ಕೆಲಸವಿಲ್ಲದ ಒಂದು ಸಂಜೆ...

  ಅವತ್ತಿನ ಸಂಜೆ, ಅಲ್ಲಿ ಕ್ರಿಕೆಟ್ ಬ್ಯಾಟ್-ಬಾಲ್ಗಳ ಬಡಿದಾಟವಿರಲಿಲ್ಲ. ಬದಲಾಗಿ ವಾಲಿಬಾಲ್ ನ್ನು ಗುದ್ದುವ ಸದ್ದಿತ್ತು. ಆಟ ಮುಗಿಸಿ ಒಳಬಂದೆ, ಮಾಡಲು ಕೆಲಸವಿಲ್ಲ. Empty mind is a devil's workshop ಎನ್ನುವಂತಾಗಿತ್ತು  ಪರಿಸ್ಥಿತಿ. ಮನಸ್ಸೆಂಬುದು ಏನನ್ನು ಧ್ಯಾನಿಸುತ್ತಿದೆ ಎನ್ನುವುದು ತಿಳಿಯದು. ಬಹುಶ ಅದರನ್ನು ಹತೋಟಿಯಲ್ಲಿಡುವುದೇ ಕಷ್ಟ. ಹೀಗೆ ಹಾಸ್ಟೆಲಿನ ರೂಮಿನ ಮೂಲೆಯಲ್ಲಿನ ಮಡಿಚಿದ ಹಾಸಿಗೆಯ ಮೇಲೆ ಕಾಲುಚಾಚಿ ಕುಳಿತೆ. ಮನದ ಲಹರಿಗಳು ನನ್ನ ಎಲ್ಲೋ ತೇಲಿಸುತ್ತಿತ್ತು.

  ಎರಡು ದಿನಗಳ ಹಿಂದೆ, ಗೆಳತಿಯ ( ನನ್ನ ಸೀನಿಯರ್ ಎನ್ನಲೊ ಅಥವಾ ನಾನವರ ಜ್ಯೂನಿಯರ್ ಎನ್ನಲೊ ಅಥವಾ the best friend ಎನ್ನಲೊ ಅಥವಾ  ...................... ಒಟ್ಟಿನಲ್ಲಿ ಅವರ ಹತ್ತಿರ ದಿವಸಕ್ಕೊಮ್ಮೆ ಮಾತಾಡದಿದ್ದರೆ ಮನಸ್ಸಿಗಂತೂ ಸಮಾಧಾನವಿಲ್ಲ.) ಹತ್ತಿರ ವ್ಯರ್ಥಾಲಾಪ ಮಾಡಿ ಸ್ವಲ್ಪ ಉಗಿಸಿಕೊಂಡಿದ್ದೆ!. ಆಮೇಲೆ ಪುಟ್ಟ sorry ಕೇಳಿದ್ದೆ.( ತುಂಬ ಪ್ರಯತ್ನಶೀಲಳು. hard worker. ಮಹತ್ವಾಕಾಂಕ್ಷಿ. ನಾನು ತುಂಬ ತಪ್ಪು ಮಾಡಿದ್ರೂ sorry  ಕೇಳಿದಾಗ ಎಲ್ಲ ಮರೆತು ಕ್ಷಮಿಸುತ್ತಾಳೆ. ಅವಳ ದೊಡ್ಡಗುಣ. ತುಂಬ ಹಿಡಿಸಿದ್ದು...so i don't mind to ask sorry, in her. ಎಷ್ಟೋ ಸಲ, ಇಲ್ಲ,ನಾನು ಹಾಗೆ ಹೇಳಲ್ಲ, sorry, promise ಅಂತೀನಿ, ಅವಳು ok, no problem ಅಂತಾಳೆ. ನಾನು ಸಚ್ಚಿ? ಅಂದ್ರೆ ಅವಳು ಮುಚ್ಚಿ ಅಂತಾಳೆ....it gives me happiness ತುಂಬ ಖುಷಿಯಾಗತ್ತೆ. ಮನದಲ್ಲಿ ನೆಮ್ಮದಿಯೊಂದು ನೆಲೆಯೂರುತ್ತೆ..i don't want to hurt her anymore....

  ಕೆಲವೊಮ್ಮೆ ಎಷ್ಟೋ ಪ್ರಶ್ನೆಗಳು ಮನವನ್ನು ಹೊಕ್ಕಿ ಉತ್ತರಕ್ಕೋಸ್ಕರ ಮಥಿಸುತ್ತಿರುತ್ತದೆ. ಜೀವನ ಅನ್ನೋದು ಏಕೆ ಹೀಗೆ? ಅದೇ ಹಳಸಲು ಪ್ರಶ್ನೆ. ನಾವೇಕೆ ಹೀಗೆ? ಯಾಕೆ ನಾವು ಈ ರೀತಿಯಾಗಿ ಬಂಧಿಯಾಗಿದ್ದೇವೆ? ನಾವೇಕೆ ಹುಟ್ಟುತ್ತಲೆ ಅಪ್ಪ, ಅಮ್ಮ, ಮನೆಯವರ ಪ್ರೀತಿಯಿಂದ ಬಂಧಿಸಲ್ಪಡುತ್ತೇವೆ? ಮನುಷ್ಯ ಇಷ್ಟೊಂದು ಸಂಘಜೀವಿಯಾಗಬೇಕಾ? ಎನ್ನುವುದು. ತಕ್ಷಣ ಸಿಗುವ ಉತ್ತರ, ಹೌದು. ಆಗಲೇಬೇಕು. ಏಕೆಂದರೆ ಇದು ಸೃಷ್ಟಿ. ಎಲ್ಲೋ ಅವಕಾಶದಲ್ಲಿ ಒಂದೇ ಸಲ ಆವಿರ್ಭವಿಸಿದವರಲ್ಲ ನಾವು. ಜೀವನ ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಅಪ್ಪ, ಅಮ್ಮರ ಪ್ರೀತಿಯ ಮಾರ್ಗದರ್ಶನ ಬೇಕು. ಸಹೋದರ/ರಿಯರ ಜೊತೆ ಹುಸಿ ಜಗಳ, ಆಪ್ತತೆ ಇರಬೇಕು, ಸಮರ್ಥ ಗುರು ಬೇಕು, ಗೆಳೆಯ/ಗೆಳತಿಯರ ಲಲ್ಲೆಯಿರಬೇಕು. ಸಮಾಜದ ಒಂದು ಪ್ರೋತ್ಸಾಹವಿರಬೇಕು. ಇದೆಲ್ಲದರ ಜೊತೆ ಬೆಳೆಯುತ್ತಿರುವ ಆ ಮನುಜನಲ್ಲಿ ಒಂದು ಅದಮ್ಯ ಉತ್ಸಾಹವಿರಬೇಕು. ಇವೆಲ್ಲವುಗಳಲ್ಲಿ ಯಾವುದೇ ಒಂದು ಕಡಿಮೆಯಾದರೂ ಆತ/ಆಕೆ ಅಷ್ಟರ ಮಟ್ಟಿಗೆ ಕುಂಠಿತಗೊಂಡಂತೆ.

  ವಾಸ್ತವ ಏನೆಂದರೆ ಜೀವನ ಇದೆಲ್ಲ ಬೇಕುಗಳನ್ನ ಪೂರೈಸಿರುವುದಿಲ್ಲ. ಆತ ಎಲ್ಲೋ ಒಂದರ ಕೊರತೆ ಇಟ್ಟೇ ಇಟ್ಟಿರುತ್ತಾನೆ. ನಾವು ಕಟ್ಟಿಕೊಳ್ಳಬೇಕಷ್ಟೆ. ದೇವರು ಇದ್ದಾನಾ? ಖಂಡಿತಾ. ನಮ್ಮ ನಂಬಿಕೆಯಲ್ಲೆ ಆತ ಇರುತ್ತಾನೆ. ನಮ್ಮೆಲ್ಲರ ವಿವೇಕವನ್ನು ಜಾಗ್ರತದಲ್ಲಿರಿಸಿ ಅವನನ್ನು ನಂಬುವ, ಸೇರುವ ದಾರಿಯನ್ನು ತೋರಿಸಿದ್ದಾನೆ. ಜೀವನವೊಂದು ಸಾಧನಾಕ್ಷೇತ್ರ. ಇಷ್ಟ ಪಡಿ. ಪ್ರಯತ್ನಿಸಿ.


Tuesday, May 22, 2012

ಹುಚ್ಚುತನ

ಕಹಿಯ ನೀನು ಸವಿಯದೆ
ಸಿಹಿಯ ಕೇಳುವುದೆ?
ಭೋಗದಿಂದ ಈ ಜಗದೊಳು
ಬದುಕ ಸವೆಸುವುದೆ?

ವಾಮಮಾರ್ಗವು ಇಲ್ಲಿ
ತರವಲ್ಲ ನಿನಗೆ
ನಿಜ ಪಥವಿರುವುದು
ಪಡೆವ ಸಿರಿ ಸಂಪತ್ತಿಗೆ.

ಮಾಯೆಯೊಳು ಬದುಕಿ ನೀ
ಪ್ರತಿಷ್ಠೆ ಸ್ವಾಭಿಮಾನದೊಳಗೆ
ಜನುಮದಲಿ ಮಸಣದಲಿ
ಬೆಲೆಯಿಲ್ಲ ಅದಕೆ.

ಆಲಯದ ಪೂಜೆಯೊಳು
ಡಂಭಾಚಾರವೇಕೆ?
ನಿರ್ಮಲ ಮನವು ಸಾಕು
ಉಪಾಸನೆಗೆ.

ಕಷ್ಟದಲೂ ಇಷ್ಟದಲೂ
ನೀನೇ ಇಲ್ಲಿವರೆಗೆ
ಮಿಥ್ಯದಲೂ ಸತ್ಯದಲೂ
ನೈತಿಕತೆಯೆ ನಿನ್ನ ಬಲಕೆ

ಹುಡುಕುವೆಯಾ ಅಂಧಕಾರದಲಿ
ನೆಮ್ಮದಿಯನು ಎಲ್ಲ ಕಡೆಗೆ?
ನಿನ್ನಲ್ಲೆ ಹುದುಗಿದೆ
ನೀ ಹೋದಾಗ ಆನಂದದೆಡೆಗೆ.

Tuesday, April 24, 2012

ಹೊನ್ನ ಬಣ್ಣದ ಉದಯದೊಳೆನ್ನ ಚಿತ್ತವ ಕದಿಯ ಹೊರಟರೆ...


                                             
 ಕನ್ನಿಕಾಳಿಗೆ,
         ಬದುಕೆಂಬುದು ಸುಂದರ. ಸುಭಗ. ಮನದ ಭಾವಗಳು ಒಣಗಿದ್ದಾಗ ಬರುವ ಭಾವಾವೇಶಗಳೆಲ್ಲ ಒಂದು ತರಹದ ಬತ್ತಿದ ಝರಿಯಲ್ಲಿ ನೀರನ್ನು ನಿರೀಕ್ಷಿಸಿದಂತೆ. ಅವು ಬುಗ್ಗೆಯಾಗಿ ಚಿಮ್ಮಲಾರವು, ತನ್ನಷ್ಟಕ್ಕೆ ತಾನೆ ಭುವಿಯಲ್ಲಿ ಅಂಕುಡೊಂಕಾಗಿ ಹರಿಯಲಾರವು.ಮನದ ಮೂಲೆಯಲ್ಲಿನ ಕೊರೆವ ನೋವುಗಳಿಗೆ ಆಂತರ್ಯಗಳಿಲ್ಲ. ಆವೇಗಗಳೂ ಇಲ್ಲ."ಬಂಗಾರದಂತಹ ನಾ ಕೊಟ್ಟ ದಿನವನ್ನು ನೀ ಹಾಳು ಮಾಡಿದೆಯೆಂದು ದಿನಪನು ಕೇಳುವನು ತಾ ಪೋಗುವಂದು"ಎಂಬ ಕವಿ ಸಾಲುಗಳೂ ಕೂಡ ಆ ಮನವನ್ನು ನಿರ್ದೇಶಿಸಲಾರವು. ನಾಲ್ಕು ಗೋಡೆಗಳ ಮಧ್ಯೆ ತಾನಿರುವೆನೆಂದು ಭಾವಿಸಿ ಮನವೆಂಬುದು ಮಗುಮ್ಮಾಗಿ ಕುಳಿತುಬಿಟ್ಟರೆ ಯಾವ ಲಹರಿಗಳು ಹರಿಯಲಾರವು. ಮನವನ್ನುಕಟ್ಟಿಹಾಕಿದರೆ ಅಂತರ್ಪಟವೆಂಬುದು ಹಾರಾಡೀತೆ? ನಾ ಕಾಣೆ.
                                            ********
   ಮಲೆನಾಡಿನ ಸುಂದರ ಅವಕಾಶದಲ್ಲಿ ಸುತ್ತ ವನಗಳ ರಾಶಿ. ಬೆಳಗ್ಗೆ ಆಕಾಶವಾಣಿಯಲ್ಲಿ,ಪಂಡಿತ್ ರವಿಶಂಕರರು ನುಡಿಸಿದ ಸಂಗೀತ ಕೇಳುತ್ತಿದ್ದೊಡನೆಯೆ ಆ ದಿನದ ಪ್ರಾರಂಭ. ಒಲೆಗೆ ಬೆಂಕಿಯನ್ನಿಟ್ಟು, ಮೈಕಾಸಿ, ಸ್ನಾನ ಮಾಡುತ್ತಿದ್ದೊಡೆ, ಆ ಬೆಳಗಿನ ಚಳಿಯಲ್ಲಿ ಸುರಾಪಾನ ಮಾಡಿದ್ದಕ್ಕಿಂತಲೂ ಚಿಲ್ಲೆನ್ನುವ ರೋಮಾಂಚನ. ಅಮ್ಮನೆರೆದ ದೋಸೆ ತಿಂದು ಹೊರಗೆ ಕಾಲಿಟ್ಟರೆ, ಮನದಿ ಒಂದು ಉತ್ಸಾಹ. ಅಲ್ಲಿ ದೂರದಲ್ಲಿ ನನಗಾಗಿ ಕಾಯುತ್ತಿದ್ದಾಳೆ ಎಂಬುದು ನೆನಪಾದಾಗ, ಬೇಗ ಅವಳ ಸೇರಿಕೊಳ್ಳುವ ಬಯಕೆ. ಬೆಳಗಿನ ಬಸ್ಸೆಂಬುದು ಐದು ನಿಮಿಷ ತಡವಾದರೂ ಶುರುವಾಯಿತು ತಳಮಳ. ಅಲ್ಲೆ ನಾಲ್ಕೈದು ಕಿಲೋಮೀಟರ್ ಪ್ರಯಾಣಿಸಿ ನಮ್ಮ ಪ್ರೌಢಶಾಲೆಗೆ ತಲುಪಿದರೆ ಮೈಯಲ್ಲೆಲ್ಲ ಪುಳಕಗಳು. ಮೊದಲು ಅವಳು ಬಂದಿದ್ದಾಳಾ? ಎಂದು ನೋಡುವ ತವಕ. ಕೆಲವೊಮ್ಮೆ ಅವಳು ಬಂದಿದ್ದರೆ, ಮಗದೊಮ್ಮೆ ನಾನು ಅವಳಿಗಾಗಿ ಕಾಯುತ್ತಿದ್ದೆ. ಕಾಯುವುದರಲ್ಲೂ ಅದೇನೋ ಸುಖ. ಚಕೋರಂಗೆ ಚಂದ್ರಮನ ಚಿಂತೆ. ಅಂತೆಯೆ ಆ ಸಮಯದಲ್ಲಿ ನನಗೆ ನನ್ನವಳ ಚಿಂತೆ. ಮನದ ತುಂಬೆಲ್ಲ ಅವಳ ಮೆರವಣಿಗೆಗಳೆ. ಮೈದಾನದಲ್ಲಿ ನಿಂತು,  ಬರುವ ಒಬ್ಬೊಬ್ಬರನ್ನು ನೋಡುತ್ತಾ, ಕಣ್ಣಳತೆಯ ದೂರದಿಂದಲೆ ಅವರನ್ನು ಗುರುತಿಸುತ್ತಾ ಕಾಯುವ ಆ ಕ್ಷಣಗಳಿವೆಯಲ್ಲ, ಅವೆಲ್ಲ ಸುಮುಧುರ ಚಡಪಡಿಕೆಗಳು. ಶ್ರೀಕೃಷ್ಣನಿಗಾಗಿ ರಾಧೆ ಯಮುನಾ ತೀರದಲ್ಲಿ ಕಾಯುತ್ತಿದ್ದಳಂತೆ. ಅವರ ಚಡಪಡಿಕೆಗಳು ನಮ್ಮವೇನೊ ಎಂದು ಭಾಸವಾಗುತ್ತಿತ್ತು ನನಗೆ. ಜೊತೆಗೆ ಐನಸ್ಟೀನನ ಸಾಪೇಕ್ಷತಾ ಸಿದ್ಧಾಂತವೂ ಸರಿ ಎನಿಸಿತ್ತು. ಅವಳನ್ನು ದೂರದಿಂದ ಗುರುತಿಸುತ್ತಿದ್ದಂತೆ ಶುರುವಾಗುತ್ತಿತ್ತು ಸಂಕಟ. ಅವಳು ನನ್ನೆಡೆಗೆ ಇಡುವ ಪ್ರತಿಯೊಂದು ಹೆಜ್ಜೆಯೂ ನನ್ನ ಹೃದಯ ಬಡಿತದ ಸದ್ದಿನೊಂದಿಗೆ ಬೆರೆಯುತ್ತಿತ್ತು.ಅವಳು ಸಮೀಪಿಸುತ್ತಿದ್ದಂತೆಲ್ಲ ನಾನು ನನ್ನ ಮನದಲ್ಲೇ ದೂರ ಓಡುತ್ತಿದ್ದೆ. ಪ್ರೀತಿ ಅಂದರೆ ಇದೇನಾ?! ಗೊತ್ತಿಲ್ಲ.
                                            **********   
        ಸರಿ, ಅವಳೂ ಶಾಲೆಯನ್ನು ಸೇರಿಕೊಳ್ಳುತ್ತಿದ್ದಳು. ಉಫ಼್! ಈಗ ಮತ್ತೊಂದು ಸವಾಲು. ಹೇಗೆ ಮಾತಾಡಿಸೋದು? ಇಷ್ಟೆಲ್ಲ ದಿವಸಗಳಿಂದಲೂ ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ. ಆದರೆ ಪ್ರತಿದಿನವೂ ಸಂಕೋಚ. ಹೇಗೆ ಮಾತಾಡಿಸುವುದು? ಎಂಬುದು. ಓರಗೆಯವರು ಯಾರಾದರೂ ನೋಡಿಬಿಟ್ಟಾರು ಎಂಬ ಭಯ. ಪ್ರತಿದಿನ ಮಾತಾಡಿದರೆ ಅವಳೇನೆಂದುಕೊಳ್ಳುತ್ತಾಳೊ ಎಂಬ ಹಿಂಜರಿಕೆ. ಸರಿ, ಎಲ್ಲ ಧೈರ್ಯವನ್ನೂ ಒಟ್ಟಿಗೆ ಸೇರಿಸಿ ಕಣ್ಣ ಸನ್ನೆ ಮಾಡಿದರೆ ನಾವಿಬ್ಬರೂ ತಯಾರು. ನಮ್ಮ ಎಂದಿನ ಸ್ಥಳದಲ್ಲಿ ಯಾರಿಗೂ ತಿಳಿಯದಂತೆ ಕದ್ದು ಮುಚ್ಚಿ ಭೇಟಿ. ಮಾರ್ಜಾಲವೆಂಬುದು ಹಾಲನ್ನು ಸಮೀಪಿಸಿದಂತೆ. ಅವರಿವರ ಕಣ್ಣು ತಪ್ಪಿಸಿ ಶಾಲೆಯ ಹಿಂದಿನ ಬಾಗಿಲಿನಿಂದ ಓಡಿ ಬಂದರೆ, ಪಕ್ಕದಲ್ಲಿರುವುದು ಇನ್ನೊಂದು ಮೈದಾನ. ಮೈದಾನದಲ್ಲಿ ಹುಚ್ಚು ಕುದುರೆಯಂತೆ ಓಡಿದರೆ ಶಾಲೆಯ ತೋಟ. ಅಲ್ಲಿ ಈಗ ತಾನೇ ನೆಟ್ಟ ಅಡಿಕೆ ಸಸಿಗಳು, ಈಗ ತಾನೇ ಫಲ ಬಿಟ್ಟ ತೆಂಗಿನಮರಗಳು, ಆಳೆತ್ತರಕ್ಕಿರುವ ದಾಳಿಂಬೆ, ಸೀತಾಫಲ, ಪೇರಲ ಗಿಡಗಳು, ರುಚಿ ತರಿಸುವ ಹುಳಿ ಮಾವು. ಇವನ್ನೆಲ್ಲ ಒಂದೇ ಉಸಿರಿಗೆ ದಾಟಿಬಿಟ್ಟರೆ, ಒಂದು ಸಾರ. ಆ ಸಾರವನ್ನೂ ದಾಟಿದರೆ ಒಂದು ಬೆಟ್ಟ. ಆ ಬೆಟ್ಟದಲ್ಲಿನ ಮರಗಿಡಗಳು ಒತ್ತೊಟ್ಟಿಗಿರುವ ಜಾಗ, ನಾವು ಸಿಗುವ ತಾಣ.
      
  ಮುಂಜಾನೆಯ ಆ ಕಿರಣಗಳನ್ನು ಧೇನುಪನು ಸೂಸುತ್ತಿದ್ದರೆ, ಪಕ್ಕದಲ್ಲಿ ಅವಳು ಜೊತೆಯಿದ್ದರೆ, ಅವಳ ದೇಹ ಪರಿಮಳವು ಸ್ವಲ್ಪ ತಾಕುತ್ತಿದ್ದರೆ, ಆಹಾ! ಅದು ಸ್ವರ್ಗ. ಅನುಭವಿಸಿಯೇ ನೋಡಬೇಕು. ದ.ರಾ.ಬೇಂದ್ರೆಯವರ ಸಾಲುಗಳು - "ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದ, ನುಣ್ಣನೆ ಎರಕವ ಹೊಯ್ದ..." ಎಂದು ಕಿವಿಗಳಲ್ಲಿ ಗುಂಯ್ ಗುಡುತ್ತಿತ್ತು.

     ಆ ಚಳಿಯ ಮುಂಜಾವಲ್ಲಿ, ಸುತ್ತ ಇಬ್ಬನಿಯು ಮುಸುಕಿರಲು, ಅವಳ ಪಿಸುಮಾತು ನನ್ನ ಕಿವಿಯಲ್ಲಿ. ಅವಳ ಕೈಗಳು ನನ್ನ ಕೈಗಳ ಜೊತೆ ತೇಪೆ ಹಾಕಿಕೊಂಡು ಆ ಗಿಡಗಳ ಬುಡದಲ್ಲಿ, ನಿಸರ್ಗದ ಮಡಿಲಲ್ಲಿ ಕುಳಿತಿದ್ದರೆ,  ಅದೊಂದು ಚಿತ್ತಾರ ರಮ್ಯ ಕಾವ್ಯ. ಹಾಡುವವರು, ಕೇಳುಗರು, ಅನುಭವಿಸುವವರು ನಾವಿಬ್ಬರೇ. ದೂರದಲ್ಲಿ ಸ್ವಲ್ಪ ಸದ್ದಾದರೂ, ಹರಿಣ ಬೆದರಿದಂತೆ ಭಯ. ಯಾರಿರುವರೋ? ಎಂದು. ಒಂದು ಒಂದೂವರೆ ಘಂಟೆಗಳ ಮಧುರ ಕ್ಷಣಗಳನ್ನು ಕಳೆದು ಮತ್ತೆ ಒಂದೇ ಉಸಿರಿನಲ್ಲಿ ಓಡಿ ಬಂದರೆ ಶಾಲೆ. ಮತ್ತೆ ಪ್ರಾರ್ಥನೆ, ಎಂದಿನ ತರಗತಿಗಳು. ಎಲ್ಲ ಮುಗಿಸಿ ಮಧ್ಯಾಹ್ನದ ಬಿಡುವಿನಲ್ಲಿಯೂ ಮತ್ತೆ ಭೇಟಿ. ಮಧ್ಯಾಹ್ನದ ತರಗತಿಗಳು ಮುಗಿದು ಶಾಲೆ ಮುಗಿಯುವ ಸಮಯ ಬಂದರೆ ಮತ್ತೆ ನಾಳೆಗಾಗಿ ಕಾಯುವಿಕೆ. ಶಾಲೆ ಬಿಟ್ಟಾಗ ಆ ಮಕ್ಕಳ ಗುಂಪಲ್ಲಿ ಅವಳೆಲ್ಲಿದ್ದಾಳೆ ಎಂದು ಹುಡುಕುವ ತವಕ. ಅವಳು ತಿರುಗಿ ನೋಡಿ ಕಣ್ಣಸನ್ನೆ ಮಾಡಿದರೆ, ಎನೋ ಸಮಾಧಾನ. ಮತ್ತೆ ಬೆಳಗಾದರೆ ಅದೇ ಭೇಟಿ ಅದೇ ಸುಖ.

  ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಮನೆಯವರಿಗೆ ಗೊತ್ತಾಗಲ್ಲವೆ? ಗೊತ್ತಾಗುವುದು. ಅವಳ ಎದುರಲ್ಲಿ ಮಾತನಾಡಲಾಗದ್ದನ್ನು ಪತ್ರದಲ್ಲಿ ಬರೆದು ಅವಳಿಗೆ ನೀಡುತ್ತಿದ್ದೆ. "ಮೈನೆ ಪ್ಯಾರ್ ಕಿಯಾ ದಂತೆ ಯಾವ ಪಾರ್‍ಇವಾಳಗಳೂ ಇರಲಿಲ್ಲ, ಕಬೂತರ್ ಜಾ...ಜಾ...ಜಾ..." ಎನ್ನಲು. ನಾನೇ ಕೊಡುತ್ತಿದ್ದೆ.

     ಅದೊಂದು ಸುಂದರ ಬೆಳಗು. ನಾವಿಬ್ಬರೂ ಮಾತಾಡುತ್ತಿದ್ದೇವೆ. ಪ್ರಿಯತಮನ ಬಾಹುಗಳು ಪ್ರಿಯತಮೆಯನ್ನು ಆವರಿಸಿತ್ತು. ಇಬ್ಬರೂ ಸಣ್ಣಗೆ ನಡುಗುತ್ತಿದ್ದೆವು. ನನ್ನ ಕೈಗಳು ಅವಳ ಸೊಂಟವನ್ನು ಬಳಸಿತ್ತು. ಅವಳ ಬಾಹುಗಳು ನನ್ನ ಬೆನ್ನನ್ನು ಆವರಿಸಿತ್ತು. ಅವಳ ಹೊದ್ದ ದುಪ್ಪಟ್ಟವು ನಮ್ಮಿಬ್ಬರನ್ನು ಮುಚ್ಚಿತ್ತು. ಒಬ್ಬೊರನ್ನೊಬ್ಬರು ಬಂಧಿಯಾಗಿಸಿದ್ದೆವು. ಹತ್ತಿರವಾದೆವು. ಇನ್ನೂ ಸನಿಹ...
      
       ರವಿಯ ಉದಯವು ಜಗವನ್ನು ತೋಯಿಸಿತ್ತು
       ಅವಳ ಅಧರವು ನನ್ನೀ ಅಧರವನ್ನು ತಾಕಿತ್ತು
       ಮರಗಿಡಗಳ ನಡುವಲ್ಲಿ ನೀಡಿದಳು ಸ್ಪರ್ಶಸುಖ
       ಬೆಳಗೋ? ವೈಭವವೋ? ಮನಸಲ್ಲಿ ಕೇಳಿತ್ತು.
ಆ ದಿನಗಳು ಎಂದಿನಂತೆ ಸಾಗಿದ್ದವು. "ಶಾಲೆಗೆ ರಜವಿದ್ದರೆ ಕದ್ದು ಫೋನಲ್ಲಿ ಮಾತಾಡುವಿಕೆ". ಹೀಗೆ ಎಲ್ಲ ನಡೆಯುತ್ತಿತ್ತು.

     ಬಹುಶಃ ನಾವಿಬ್ಬರು ಕುರುಡರಾಗಿದ್ದೆವೆ? ಅಥವಾ ಪ್ರೀತಿ ಕುರುಡೋ? ಗೊತ್ತಿಲ್ಲ. ಆ ಊರಿನಲ್ಲಿ ನಮಗರಿವಿಲ್ಲದಂತೆ ನಾವು ಜನರ ಮಾತುಗಳಿಗೆ ಬಲಿಯಾಗಿದ್ದೆವು. ಆ ಮಲೆನಾಡಿನ ಮಲೆಗಳಲ್ಲಿರುವ ಚಿಕ್ಕ ಪೇಟೆಯ ಪ್ರತಿ ಬೀದಿಯಲ್ಲಿ ನಾನು ಅಥವಾ ಅವಳು ನಡೆಯುತ್ತಿದ್ದರೆ, ಸುತ್ತ ಜನರ ನೋಟಗಳು ಶರಗುಚ್ಛವಾಗಿದ್ದವೆ? ಅರಿಯಲಾರೆ. ಜನರ ಮಾತುಗಳು ನಮ್ಮನ್ನು ತಿವಿಯುತ್ತಿದ್ದವೆ? ತಿಳಿಯದಾದೆ. ಶಾಲೆಯಲ್ಲಿ ನಾವಂತೂ ಬೇಡವಾಗಿದ್ದೆವು. ಒಟ್ಟಿನಲ್ಲಿ ಆ ಎರಡು ವರುಷಗಳು ಹೇಗೆ ಕಳೆಯಿತೊ ನಾ ಕಾಣೆ. ಗುರುವೃಂದವೆಲ್ಲ ಚುಚ್ಚಿ ಮಾತಾಡುತ್ತಿತ್ತು. ನಾವು ತಪ್ಪು ಮಾಡಿದ್ದೇವೆಯೆ? ಗೊತ್ತಿಲ್ಲ. ನಮ್ಮ ಪ್ರೌಢ ಶಿಕ್ಷಣ ಯಾವಾಗ ಮುಗಿಯಿತೋ? ತಿಳಿದಿಲ್ಲ. ಆದರೂ ಒಂದಂತೂ ನಿಜ. ನಾವಿಬ್ಬರೂ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದೆವು. ಮುಂದೆ ನಗರದ ಕಡೆ ಮುಖ. ಅವಳೊಂದು ನಗರಕ್ಕೆ, ನಾನೊಂದು ನಗರಕ್ಕೆ. ಜೀವನವೆಂಬುದು ಸವಾಲೆಸೆದಿತ್ತು. ಎದುರಿಸಲಾರದೆ ನಾವಿಬ್ಬರು ಬೇರೆಯಾದೆವು. ಇಬ್ಬರೂ ಪರಸ್ಪರರನ್ನು ಈಗಲೂ ಗೌರವಿಸುತ್ತೇವೆ. ಜೀವನ ಮುಂದುವರೆದಿದೆ....... 
                                        
                                 

    ಇದೆಲ್ಲ ಏಕೆ ಎಂದೆಯಾ? ಮೊನ್ನೆ ನೀನು ಆ ಸಂಜೆಯಲ್ಲಿ, ಆ ವರ್ಣಚಿತ್ತಾರದಲ್ಲಿ ನನ್ನೆದುರಲ್ಲಿ ನಿನ್ನ ಭಾವಗಳನ್ನು, ನನ್ನ ಮೇಲಿನ ಅನುರಾಗವನ್ನು ತೋಡಿಕೊಂಡಾಗ...ನನ್ನ ನಿಲಯದ ಮಹಡಿಯ ಮೇಲೆ ಕುಳಿತು ಒಮ್ಮೆ ಹಿಂತಿರುಗಿ ನೋಡಿದಾಗ, ಮನದ ಭಾವವೆಲ್ಲ ಬತ್ತಿ, ಝರಿಯಲ್ಲಿ ನೀರು ಆವಿಯಾಗಿ ಭಾವಗಳೆಲ್ಲ ಬರಿದಾಗಿದ್ದಾಗ, ಸಂಜೆ ಮುಳುಗುತ್ತಿದ್ದ ಸೂರ್ಯನು ನನ್ನ ನೋಡುತ್ತಿದ್ದ. ಅವನು ಕೆಂಪಾದಾಗ ಉದಯವಾದ ಆ ಹೊನ್ನ ಬಣ್ಣವು ನನ್ನ ಚಿತ್ತವನ್ನು ಕದಿಯ ಹೊರಟಿತ್ತು...


                                                                                           ಇತಿ ನಿನ್ನವ,

( ಶಬ್ದ್ - ೨೦೧೨ ನ ಕನ್ನಡ ಸೃಜನಾತ್ಮಕ ಬರವಣಿಗೆಯಲ್ಲಿ ಪ್ರಥಮ ಬಂದಿದ್ದು. ಹ್ಮ್..!! ಸ್ವಲ್ಪ fiction ಸ್ವಲ್ಪ reality.  picture at the bottom- sunset in my native.)


Saturday, March 17, 2012

ಚಾತಕ


ಸಂಜೆ ಐದರ ಸಮಯದಲ್ಲಿ
ಬೆರೆತ ಮೌನದ ತನುವಿನಲ್ಲಿ
ಮನದ ಮೂಲೆಯಲಿ ತುಂಬಿರುವ ಭಾವಗಳು
ನಿನ್ನ ನೆನಪುಗಳನ್ನು ಕದಡಿವೆ.


ಉದರದಲ್ಲಿನ ತಳಮಳವು
ಎದೆಯಾಳದಲ್ಲಿನ ಸಂಕೋಚವಾಗಿ
ಸ್ನೇಹವೆನ್ನಲೊ? ಪ್ರೀತಿಯೆನ್ನಲೊ?
ಎಂಬ ದ್ವಂದ್ವದಲೆಗಳನೆಬ್ಬಿಸಿವೆ.


ನಿನ್ನ ಕರೆಯಲೊ? ಜೊತೆ ಮಾತಾಡಲೊ?
ನಿನಗೆ ಹೇಳಲೊ? ತಿಳಿಯದಾಗಿದೆ.
ಹಿರಿತನವೊ-ಕಿರಿತನವೊ, ನಮ್ಮ ಸುತ್ತಲ
ಸನ್ನಿವೇಶಗಳ ಪರಿಧಿಯೋ ಅರಿಯದಾಗಿದೆ.


ನಿನ್ನ ಮೆಲ್ಲಗೆ ಗೌರವಿಸಿ,
ನಿನ್ನಲ್ಲಿ ಜತನದಿಂದ ನಂಬಿಕೆಯಿರಿಸಿ,
ಮನದಾಳದಲ್ಲಿ ನಿನ್ನ ಸ್ನೇಹಿಸಿ, ಪ್ರೀತಿಸಿ,
ಎಲ್ಲವನೂ ಉತ್ತರಿಸುವ ಕಾಲಕ್ಕಾಗಿ ಕಾಯುತ್ತಿರುವೆ.

Saturday, February 25, 2012

ಅಂಬೆಗಾಲು


   ಬದುಕೆಂಬುದು ಸುಂದರ. ತೊದಲು ಮಾತಾಡುತ್ತಾ ಇದನ್ನು ಪ್ರಾರಂಭಿಸುವ ನಾವು ಶಾಶ್ವತವಾದ ಮೌನದ ಕಡೆಗೆ ಸಾಗುತ್ತಿರುತ್ತೇವೆ. ನಮ್ಮ ಜೀವನವೆಂಬುದು ಒಂದು ತರಹದ ಡೌನ್-ಕೌಂಟರ್ ಇದ್ದಂತೆ. ಮೊದಲೇ 'ಇಂತಿಷ್ಟು' ಸಮಯ ಎಂಬುದು ನಿರ್ಧಿಷ್ಟವಾಗಿದ್ದರೂ, ನಾವು ಒಂದು, ಎರಡು, ಮೂರು... ವರುಷಗಳೆಂದು ಲೆಕ್ಕ ಹಾಕುತ್ತೇವೆ. ಬದಲಾಗಿ ಇದನ್ನೇ, ಎಪ್ಪತ್ತು, ಅರವತ್ತೊಂಬತ್ತು, ಅರವತ್ತೆಂಟು... ವರುಷಗಳು ಬಾಕಿ ಉಳಿದಿವೆ ಎನ್ನುತ್ತಾ ಲೆಕ್ಕಿಸಿಬಹುದೇನೊ... 

     ಈ ಎರಡು ಕೊನೆಗಳ ನಡುವಲ್ಲಿ: ಅವೆಷ್ಟೋ ಸಂತಸಗಳು, ಅವೆಷ್ಟೋ ದುಃಖಗಳು, ಅವೆಷ್ಟೋ ನೆನಪುಗಳು, ಸಾಧನೆಗಳು, ವಿಫಲತೆಗಳು, ಮತ್ತೆ ಮೇಲೆದ್ದು ಬರುವ ಪ್ರಯತ್ನಗಳು, ಹಂಬಲಗಳು, ಬದುಕಿನ ಆಸೆಗಳು, ಬಯಕೆಗಳು, ಕನಸುಗಳು, ಬದುಕ ತಿರುವುಗಳು, ಹಾದಿ ಬದಿಯ ನಿಲ್ದಾಣಗಳು, ಒಮ್ಮೆ ಜೊತೆಗೂಡುವ ಸಂಗಾತಿ, ಕೈ ಹಿಡಿದು ನಡೆಸಿದಷ್ಟೂ ಖುಷಿ ಪಡುವ ಕಂದಮ್ಮಗಳು, ಮತ್ತದೇ ಓಟ ಮತ್ತದೇ ಜೀವನ.

     ಆದರೆ ಈ ಒಂದು ರಂಗಮಂಚದಲ್ಲಿ ನಟಿಸಲೇ ಬೇಕಲ್ಲ?! ನಿರ್ದೇಶಕ ನಿರ್ದೇಶಿಸಿದಂತೆ ಅಭಿನಯಿಸಿದರೆ ಆಯಿತು ಎಂದು ಸುಮ್ಮನಿರಲಾದೀತೆ? ನಮ್ಮ ಭಾವಾವೇಶಗಳು, ನಮ್ಮ ಭಾವನೆಗಳು, ನಮ್ಮ ಕೋಪ, ರೌದ್ರ, ಶೃಂಗಾರ, ಪ್ರೇಮ, ಶಾಂತ, ಸಂತಸದ ರಸಗಳನ್ನು ನಾವು ತೋರ್ಪಡಿಸಬೇಕಲ್ಲವೆ? ನಮ್ಮ ಪ್ರಯತ್ನವಿಲ್ಲದೇ ಹಾಗೇ ಇದ್ದರಾದೀತೆ?... ಅದೇ ಅನಿವಾರ್ಯತೆ. 

    ಇಷ್ಟೆಲ್ಲ ಕೆಲಸಕ್ಕೆ ಬಾರದ! ಆಲೋಚನೆಗಳು ನನ್ನ ಚಿತ್ತಭಿತ್ತಿಯಲ್ಲಿ ಓಡಾಡುತ್ತಿರುವಾಗ ಗರಿಗೆದರಿದ ಪುಟ್ಟ ಕನಸು ಬ್ಲಾಗ್. ಬಹುಶಃ ಇದು ಈಗ್ಗೆ ಮೂರು-ನಾಲ್ಕು ವರ್ಷಗಳದ್ದು. ನಾನೇಕೆ ಬರೆಯಬಾರದು? ಎಂಬ ತುಮುಲಗಳ ನಡುವೆಯೇ ಆಸೆ ಮೂಡಿತ್ತು. ಈ ಆಸೆಯ ಒತ್ತಡವನ್ನು ತಡೆದೂ ತಡೆದು, ಗಜಗರ್ಭವಾಗಿ ಅಂತೂ ಈ ಬ್ಲಾಗಿಗೆ ಜನ್ಮವಿತ್ತೆ. ಇದು ನನ್ನ ಕನಸುಗಳ 'ಮೊದಲಿನ ಕೂಸು', ಪುಟ್ಟದ್ದು, ಅಂಬೆಗಾಲನ್ನು ಇಡುತ್ತಿದೆ.

    ಮುಂದಿನ 'ನೌಕರಿ' ಎಂಬ ಜೀವನದಲ್ಲಿ 'ಕಾರ್ಪೊರೇಟ್' ಜಗತ್ತಲ್ಲಿ ಕಳೆದು ಹೋಗುತ್ತೇನೆಯೋ ನಾನು, ಎಂಬ ಭಯದಿಂದ ಈಗಲೆ ಜನ್ಮವಿತ್ತೆ. ಇದಾದರೂ ನನ್ನನ್ನು ಕ್ರಿಯಾಶೀಲನನ್ನಾಗಿರಿಸೀತೆಂಬ ಆಶಯ. ಪುಟ್ಟ ಭರವಸೆ. ನಿಮ್ಮ ಓದು, ನಿಮ್ಮ ಹಾರೈಕೆ, ನಿಮ್ಮ ಅನಿಸಿಕೆ... ನನ್ನ ಇರುವಿಕೆ.

    ಒಂದು ನಿಮಿಷ, ಹುಚ್ಚು ಮನ - ಹತ್ತಾರು ಪುಟಗಳು ಎಂಬ ಹೆಸರೇಕೆ? ಏನಿಲ್ಲ. ಇವತ್ತು ಪ್ರೀತಿ-ಪ್ರೇಮ-ಪ್ರಣಯ ಎನ್ನುತ್ತಿದ್ದರೆ ನಾಳೆ ರಾಜಕೀಯ, ಜನರು, ಜಗತ್ತು ಅಂತೆಲ್ಲ ಬರೆಯುತ್ತೇನೆ. ಏಕೆಂದರೆ ನಮ್ಮದು ಹುಚ್ಚು ಮನ ಅದರೊಳಗೆ ಹತ್ತಾರು ಪುಟಗಳು.

 ನಿಮ್ಮ ಓದು, ನನ್ನ ಇರುವು.