Tuesday, April 24, 2012

ಹೊನ್ನ ಬಣ್ಣದ ಉದಯದೊಳೆನ್ನ ಚಿತ್ತವ ಕದಿಯ ಹೊರಟರೆ...


                                             
 ಕನ್ನಿಕಾಳಿಗೆ,
         ಬದುಕೆಂಬುದು ಸುಂದರ. ಸುಭಗ. ಮನದ ಭಾವಗಳು ಒಣಗಿದ್ದಾಗ ಬರುವ ಭಾವಾವೇಶಗಳೆಲ್ಲ ಒಂದು ತರಹದ ಬತ್ತಿದ ಝರಿಯಲ್ಲಿ ನೀರನ್ನು ನಿರೀಕ್ಷಿಸಿದಂತೆ. ಅವು ಬುಗ್ಗೆಯಾಗಿ ಚಿಮ್ಮಲಾರವು, ತನ್ನಷ್ಟಕ್ಕೆ ತಾನೆ ಭುವಿಯಲ್ಲಿ ಅಂಕುಡೊಂಕಾಗಿ ಹರಿಯಲಾರವು.ಮನದ ಮೂಲೆಯಲ್ಲಿನ ಕೊರೆವ ನೋವುಗಳಿಗೆ ಆಂತರ್ಯಗಳಿಲ್ಲ. ಆವೇಗಗಳೂ ಇಲ್ಲ."ಬಂಗಾರದಂತಹ ನಾ ಕೊಟ್ಟ ದಿನವನ್ನು ನೀ ಹಾಳು ಮಾಡಿದೆಯೆಂದು ದಿನಪನು ಕೇಳುವನು ತಾ ಪೋಗುವಂದು"ಎಂಬ ಕವಿ ಸಾಲುಗಳೂ ಕೂಡ ಆ ಮನವನ್ನು ನಿರ್ದೇಶಿಸಲಾರವು. ನಾಲ್ಕು ಗೋಡೆಗಳ ಮಧ್ಯೆ ತಾನಿರುವೆನೆಂದು ಭಾವಿಸಿ ಮನವೆಂಬುದು ಮಗುಮ್ಮಾಗಿ ಕುಳಿತುಬಿಟ್ಟರೆ ಯಾವ ಲಹರಿಗಳು ಹರಿಯಲಾರವು. ಮನವನ್ನುಕಟ್ಟಿಹಾಕಿದರೆ ಅಂತರ್ಪಟವೆಂಬುದು ಹಾರಾಡೀತೆ? ನಾ ಕಾಣೆ.
                                            ********
   ಮಲೆನಾಡಿನ ಸುಂದರ ಅವಕಾಶದಲ್ಲಿ ಸುತ್ತ ವನಗಳ ರಾಶಿ. ಬೆಳಗ್ಗೆ ಆಕಾಶವಾಣಿಯಲ್ಲಿ,ಪಂಡಿತ್ ರವಿಶಂಕರರು ನುಡಿಸಿದ ಸಂಗೀತ ಕೇಳುತ್ತಿದ್ದೊಡನೆಯೆ ಆ ದಿನದ ಪ್ರಾರಂಭ. ಒಲೆಗೆ ಬೆಂಕಿಯನ್ನಿಟ್ಟು, ಮೈಕಾಸಿ, ಸ್ನಾನ ಮಾಡುತ್ತಿದ್ದೊಡೆ, ಆ ಬೆಳಗಿನ ಚಳಿಯಲ್ಲಿ ಸುರಾಪಾನ ಮಾಡಿದ್ದಕ್ಕಿಂತಲೂ ಚಿಲ್ಲೆನ್ನುವ ರೋಮಾಂಚನ. ಅಮ್ಮನೆರೆದ ದೋಸೆ ತಿಂದು ಹೊರಗೆ ಕಾಲಿಟ್ಟರೆ, ಮನದಿ ಒಂದು ಉತ್ಸಾಹ. ಅಲ್ಲಿ ದೂರದಲ್ಲಿ ನನಗಾಗಿ ಕಾಯುತ್ತಿದ್ದಾಳೆ ಎಂಬುದು ನೆನಪಾದಾಗ, ಬೇಗ ಅವಳ ಸೇರಿಕೊಳ್ಳುವ ಬಯಕೆ. ಬೆಳಗಿನ ಬಸ್ಸೆಂಬುದು ಐದು ನಿಮಿಷ ತಡವಾದರೂ ಶುರುವಾಯಿತು ತಳಮಳ. ಅಲ್ಲೆ ನಾಲ್ಕೈದು ಕಿಲೋಮೀಟರ್ ಪ್ರಯಾಣಿಸಿ ನಮ್ಮ ಪ್ರೌಢಶಾಲೆಗೆ ತಲುಪಿದರೆ ಮೈಯಲ್ಲೆಲ್ಲ ಪುಳಕಗಳು. ಮೊದಲು ಅವಳು ಬಂದಿದ್ದಾಳಾ? ಎಂದು ನೋಡುವ ತವಕ. ಕೆಲವೊಮ್ಮೆ ಅವಳು ಬಂದಿದ್ದರೆ, ಮಗದೊಮ್ಮೆ ನಾನು ಅವಳಿಗಾಗಿ ಕಾಯುತ್ತಿದ್ದೆ. ಕಾಯುವುದರಲ್ಲೂ ಅದೇನೋ ಸುಖ. ಚಕೋರಂಗೆ ಚಂದ್ರಮನ ಚಿಂತೆ. ಅಂತೆಯೆ ಆ ಸಮಯದಲ್ಲಿ ನನಗೆ ನನ್ನವಳ ಚಿಂತೆ. ಮನದ ತುಂಬೆಲ್ಲ ಅವಳ ಮೆರವಣಿಗೆಗಳೆ. ಮೈದಾನದಲ್ಲಿ ನಿಂತು,  ಬರುವ ಒಬ್ಬೊಬ್ಬರನ್ನು ನೋಡುತ್ತಾ, ಕಣ್ಣಳತೆಯ ದೂರದಿಂದಲೆ ಅವರನ್ನು ಗುರುತಿಸುತ್ತಾ ಕಾಯುವ ಆ ಕ್ಷಣಗಳಿವೆಯಲ್ಲ, ಅವೆಲ್ಲ ಸುಮುಧುರ ಚಡಪಡಿಕೆಗಳು. ಶ್ರೀಕೃಷ್ಣನಿಗಾಗಿ ರಾಧೆ ಯಮುನಾ ತೀರದಲ್ಲಿ ಕಾಯುತ್ತಿದ್ದಳಂತೆ. ಅವರ ಚಡಪಡಿಕೆಗಳು ನಮ್ಮವೇನೊ ಎಂದು ಭಾಸವಾಗುತ್ತಿತ್ತು ನನಗೆ. ಜೊತೆಗೆ ಐನಸ್ಟೀನನ ಸಾಪೇಕ್ಷತಾ ಸಿದ್ಧಾಂತವೂ ಸರಿ ಎನಿಸಿತ್ತು. ಅವಳನ್ನು ದೂರದಿಂದ ಗುರುತಿಸುತ್ತಿದ್ದಂತೆ ಶುರುವಾಗುತ್ತಿತ್ತು ಸಂಕಟ. ಅವಳು ನನ್ನೆಡೆಗೆ ಇಡುವ ಪ್ರತಿಯೊಂದು ಹೆಜ್ಜೆಯೂ ನನ್ನ ಹೃದಯ ಬಡಿತದ ಸದ್ದಿನೊಂದಿಗೆ ಬೆರೆಯುತ್ತಿತ್ತು.ಅವಳು ಸಮೀಪಿಸುತ್ತಿದ್ದಂತೆಲ್ಲ ನಾನು ನನ್ನ ಮನದಲ್ಲೇ ದೂರ ಓಡುತ್ತಿದ್ದೆ. ಪ್ರೀತಿ ಅಂದರೆ ಇದೇನಾ?! ಗೊತ್ತಿಲ್ಲ.
                                            **********   
        ಸರಿ, ಅವಳೂ ಶಾಲೆಯನ್ನು ಸೇರಿಕೊಳ್ಳುತ್ತಿದ್ದಳು. ಉಫ಼್! ಈಗ ಮತ್ತೊಂದು ಸವಾಲು. ಹೇಗೆ ಮಾತಾಡಿಸೋದು? ಇಷ್ಟೆಲ್ಲ ದಿವಸಗಳಿಂದಲೂ ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ. ಆದರೆ ಪ್ರತಿದಿನವೂ ಸಂಕೋಚ. ಹೇಗೆ ಮಾತಾಡಿಸುವುದು? ಎಂಬುದು. ಓರಗೆಯವರು ಯಾರಾದರೂ ನೋಡಿಬಿಟ್ಟಾರು ಎಂಬ ಭಯ. ಪ್ರತಿದಿನ ಮಾತಾಡಿದರೆ ಅವಳೇನೆಂದುಕೊಳ್ಳುತ್ತಾಳೊ ಎಂಬ ಹಿಂಜರಿಕೆ. ಸರಿ, ಎಲ್ಲ ಧೈರ್ಯವನ್ನೂ ಒಟ್ಟಿಗೆ ಸೇರಿಸಿ ಕಣ್ಣ ಸನ್ನೆ ಮಾಡಿದರೆ ನಾವಿಬ್ಬರೂ ತಯಾರು. ನಮ್ಮ ಎಂದಿನ ಸ್ಥಳದಲ್ಲಿ ಯಾರಿಗೂ ತಿಳಿಯದಂತೆ ಕದ್ದು ಮುಚ್ಚಿ ಭೇಟಿ. ಮಾರ್ಜಾಲವೆಂಬುದು ಹಾಲನ್ನು ಸಮೀಪಿಸಿದಂತೆ. ಅವರಿವರ ಕಣ್ಣು ತಪ್ಪಿಸಿ ಶಾಲೆಯ ಹಿಂದಿನ ಬಾಗಿಲಿನಿಂದ ಓಡಿ ಬಂದರೆ, ಪಕ್ಕದಲ್ಲಿರುವುದು ಇನ್ನೊಂದು ಮೈದಾನ. ಮೈದಾನದಲ್ಲಿ ಹುಚ್ಚು ಕುದುರೆಯಂತೆ ಓಡಿದರೆ ಶಾಲೆಯ ತೋಟ. ಅಲ್ಲಿ ಈಗ ತಾನೇ ನೆಟ್ಟ ಅಡಿಕೆ ಸಸಿಗಳು, ಈಗ ತಾನೇ ಫಲ ಬಿಟ್ಟ ತೆಂಗಿನಮರಗಳು, ಆಳೆತ್ತರಕ್ಕಿರುವ ದಾಳಿಂಬೆ, ಸೀತಾಫಲ, ಪೇರಲ ಗಿಡಗಳು, ರುಚಿ ತರಿಸುವ ಹುಳಿ ಮಾವು. ಇವನ್ನೆಲ್ಲ ಒಂದೇ ಉಸಿರಿಗೆ ದಾಟಿಬಿಟ್ಟರೆ, ಒಂದು ಸಾರ. ಆ ಸಾರವನ್ನೂ ದಾಟಿದರೆ ಒಂದು ಬೆಟ್ಟ. ಆ ಬೆಟ್ಟದಲ್ಲಿನ ಮರಗಿಡಗಳು ಒತ್ತೊಟ್ಟಿಗಿರುವ ಜಾಗ, ನಾವು ಸಿಗುವ ತಾಣ.
      
  ಮುಂಜಾನೆಯ ಆ ಕಿರಣಗಳನ್ನು ಧೇನುಪನು ಸೂಸುತ್ತಿದ್ದರೆ, ಪಕ್ಕದಲ್ಲಿ ಅವಳು ಜೊತೆಯಿದ್ದರೆ, ಅವಳ ದೇಹ ಪರಿಮಳವು ಸ್ವಲ್ಪ ತಾಕುತ್ತಿದ್ದರೆ, ಆಹಾ! ಅದು ಸ್ವರ್ಗ. ಅನುಭವಿಸಿಯೇ ನೋಡಬೇಕು. ದ.ರಾ.ಬೇಂದ್ರೆಯವರ ಸಾಲುಗಳು - "ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದ, ನುಣ್ಣನೆ ಎರಕವ ಹೊಯ್ದ..." ಎಂದು ಕಿವಿಗಳಲ್ಲಿ ಗುಂಯ್ ಗುಡುತ್ತಿತ್ತು.

     ಆ ಚಳಿಯ ಮುಂಜಾವಲ್ಲಿ, ಸುತ್ತ ಇಬ್ಬನಿಯು ಮುಸುಕಿರಲು, ಅವಳ ಪಿಸುಮಾತು ನನ್ನ ಕಿವಿಯಲ್ಲಿ. ಅವಳ ಕೈಗಳು ನನ್ನ ಕೈಗಳ ಜೊತೆ ತೇಪೆ ಹಾಕಿಕೊಂಡು ಆ ಗಿಡಗಳ ಬುಡದಲ್ಲಿ, ನಿಸರ್ಗದ ಮಡಿಲಲ್ಲಿ ಕುಳಿತಿದ್ದರೆ,  ಅದೊಂದು ಚಿತ್ತಾರ ರಮ್ಯ ಕಾವ್ಯ. ಹಾಡುವವರು, ಕೇಳುಗರು, ಅನುಭವಿಸುವವರು ನಾವಿಬ್ಬರೇ. ದೂರದಲ್ಲಿ ಸ್ವಲ್ಪ ಸದ್ದಾದರೂ, ಹರಿಣ ಬೆದರಿದಂತೆ ಭಯ. ಯಾರಿರುವರೋ? ಎಂದು. ಒಂದು ಒಂದೂವರೆ ಘಂಟೆಗಳ ಮಧುರ ಕ್ಷಣಗಳನ್ನು ಕಳೆದು ಮತ್ತೆ ಒಂದೇ ಉಸಿರಿನಲ್ಲಿ ಓಡಿ ಬಂದರೆ ಶಾಲೆ. ಮತ್ತೆ ಪ್ರಾರ್ಥನೆ, ಎಂದಿನ ತರಗತಿಗಳು. ಎಲ್ಲ ಮುಗಿಸಿ ಮಧ್ಯಾಹ್ನದ ಬಿಡುವಿನಲ್ಲಿಯೂ ಮತ್ತೆ ಭೇಟಿ. ಮಧ್ಯಾಹ್ನದ ತರಗತಿಗಳು ಮುಗಿದು ಶಾಲೆ ಮುಗಿಯುವ ಸಮಯ ಬಂದರೆ ಮತ್ತೆ ನಾಳೆಗಾಗಿ ಕಾಯುವಿಕೆ. ಶಾಲೆ ಬಿಟ್ಟಾಗ ಆ ಮಕ್ಕಳ ಗುಂಪಲ್ಲಿ ಅವಳೆಲ್ಲಿದ್ದಾಳೆ ಎಂದು ಹುಡುಕುವ ತವಕ. ಅವಳು ತಿರುಗಿ ನೋಡಿ ಕಣ್ಣಸನ್ನೆ ಮಾಡಿದರೆ, ಎನೋ ಸಮಾಧಾನ. ಮತ್ತೆ ಬೆಳಗಾದರೆ ಅದೇ ಭೇಟಿ ಅದೇ ಸುಖ.

  ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಮನೆಯವರಿಗೆ ಗೊತ್ತಾಗಲ್ಲವೆ? ಗೊತ್ತಾಗುವುದು. ಅವಳ ಎದುರಲ್ಲಿ ಮಾತನಾಡಲಾಗದ್ದನ್ನು ಪತ್ರದಲ್ಲಿ ಬರೆದು ಅವಳಿಗೆ ನೀಡುತ್ತಿದ್ದೆ. "ಮೈನೆ ಪ್ಯಾರ್ ಕಿಯಾ ದಂತೆ ಯಾವ ಪಾರ್‍ಇವಾಳಗಳೂ ಇರಲಿಲ್ಲ, ಕಬೂತರ್ ಜಾ...ಜಾ...ಜಾ..." ಎನ್ನಲು. ನಾನೇ ಕೊಡುತ್ತಿದ್ದೆ.

     ಅದೊಂದು ಸುಂದರ ಬೆಳಗು. ನಾವಿಬ್ಬರೂ ಮಾತಾಡುತ್ತಿದ್ದೇವೆ. ಪ್ರಿಯತಮನ ಬಾಹುಗಳು ಪ್ರಿಯತಮೆಯನ್ನು ಆವರಿಸಿತ್ತು. ಇಬ್ಬರೂ ಸಣ್ಣಗೆ ನಡುಗುತ್ತಿದ್ದೆವು. ನನ್ನ ಕೈಗಳು ಅವಳ ಸೊಂಟವನ್ನು ಬಳಸಿತ್ತು. ಅವಳ ಬಾಹುಗಳು ನನ್ನ ಬೆನ್ನನ್ನು ಆವರಿಸಿತ್ತು. ಅವಳ ಹೊದ್ದ ದುಪ್ಪಟ್ಟವು ನಮ್ಮಿಬ್ಬರನ್ನು ಮುಚ್ಚಿತ್ತು. ಒಬ್ಬೊರನ್ನೊಬ್ಬರು ಬಂಧಿಯಾಗಿಸಿದ್ದೆವು. ಹತ್ತಿರವಾದೆವು. ಇನ್ನೂ ಸನಿಹ...
      
       ರವಿಯ ಉದಯವು ಜಗವನ್ನು ತೋಯಿಸಿತ್ತು
       ಅವಳ ಅಧರವು ನನ್ನೀ ಅಧರವನ್ನು ತಾಕಿತ್ತು
       ಮರಗಿಡಗಳ ನಡುವಲ್ಲಿ ನೀಡಿದಳು ಸ್ಪರ್ಶಸುಖ
       ಬೆಳಗೋ? ವೈಭವವೋ? ಮನಸಲ್ಲಿ ಕೇಳಿತ್ತು.
ಆ ದಿನಗಳು ಎಂದಿನಂತೆ ಸಾಗಿದ್ದವು. "ಶಾಲೆಗೆ ರಜವಿದ್ದರೆ ಕದ್ದು ಫೋನಲ್ಲಿ ಮಾತಾಡುವಿಕೆ". ಹೀಗೆ ಎಲ್ಲ ನಡೆಯುತ್ತಿತ್ತು.

     ಬಹುಶಃ ನಾವಿಬ್ಬರು ಕುರುಡರಾಗಿದ್ದೆವೆ? ಅಥವಾ ಪ್ರೀತಿ ಕುರುಡೋ? ಗೊತ್ತಿಲ್ಲ. ಆ ಊರಿನಲ್ಲಿ ನಮಗರಿವಿಲ್ಲದಂತೆ ನಾವು ಜನರ ಮಾತುಗಳಿಗೆ ಬಲಿಯಾಗಿದ್ದೆವು. ಆ ಮಲೆನಾಡಿನ ಮಲೆಗಳಲ್ಲಿರುವ ಚಿಕ್ಕ ಪೇಟೆಯ ಪ್ರತಿ ಬೀದಿಯಲ್ಲಿ ನಾನು ಅಥವಾ ಅವಳು ನಡೆಯುತ್ತಿದ್ದರೆ, ಸುತ್ತ ಜನರ ನೋಟಗಳು ಶರಗುಚ್ಛವಾಗಿದ್ದವೆ? ಅರಿಯಲಾರೆ. ಜನರ ಮಾತುಗಳು ನಮ್ಮನ್ನು ತಿವಿಯುತ್ತಿದ್ದವೆ? ತಿಳಿಯದಾದೆ. ಶಾಲೆಯಲ್ಲಿ ನಾವಂತೂ ಬೇಡವಾಗಿದ್ದೆವು. ಒಟ್ಟಿನಲ್ಲಿ ಆ ಎರಡು ವರುಷಗಳು ಹೇಗೆ ಕಳೆಯಿತೊ ನಾ ಕಾಣೆ. ಗುರುವೃಂದವೆಲ್ಲ ಚುಚ್ಚಿ ಮಾತಾಡುತ್ತಿತ್ತು. ನಾವು ತಪ್ಪು ಮಾಡಿದ್ದೇವೆಯೆ? ಗೊತ್ತಿಲ್ಲ. ನಮ್ಮ ಪ್ರೌಢ ಶಿಕ್ಷಣ ಯಾವಾಗ ಮುಗಿಯಿತೋ? ತಿಳಿದಿಲ್ಲ. ಆದರೂ ಒಂದಂತೂ ನಿಜ. ನಾವಿಬ್ಬರೂ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದೆವು. ಮುಂದೆ ನಗರದ ಕಡೆ ಮುಖ. ಅವಳೊಂದು ನಗರಕ್ಕೆ, ನಾನೊಂದು ನಗರಕ್ಕೆ. ಜೀವನವೆಂಬುದು ಸವಾಲೆಸೆದಿತ್ತು. ಎದುರಿಸಲಾರದೆ ನಾವಿಬ್ಬರು ಬೇರೆಯಾದೆವು. ಇಬ್ಬರೂ ಪರಸ್ಪರರನ್ನು ಈಗಲೂ ಗೌರವಿಸುತ್ತೇವೆ. ಜೀವನ ಮುಂದುವರೆದಿದೆ....... 
                                        
                                 

    ಇದೆಲ್ಲ ಏಕೆ ಎಂದೆಯಾ? ಮೊನ್ನೆ ನೀನು ಆ ಸಂಜೆಯಲ್ಲಿ, ಆ ವರ್ಣಚಿತ್ತಾರದಲ್ಲಿ ನನ್ನೆದುರಲ್ಲಿ ನಿನ್ನ ಭಾವಗಳನ್ನು, ನನ್ನ ಮೇಲಿನ ಅನುರಾಗವನ್ನು ತೋಡಿಕೊಂಡಾಗ...ನನ್ನ ನಿಲಯದ ಮಹಡಿಯ ಮೇಲೆ ಕುಳಿತು ಒಮ್ಮೆ ಹಿಂತಿರುಗಿ ನೋಡಿದಾಗ, ಮನದ ಭಾವವೆಲ್ಲ ಬತ್ತಿ, ಝರಿಯಲ್ಲಿ ನೀರು ಆವಿಯಾಗಿ ಭಾವಗಳೆಲ್ಲ ಬರಿದಾಗಿದ್ದಾಗ, ಸಂಜೆ ಮುಳುಗುತ್ತಿದ್ದ ಸೂರ್ಯನು ನನ್ನ ನೋಡುತ್ತಿದ್ದ. ಅವನು ಕೆಂಪಾದಾಗ ಉದಯವಾದ ಆ ಹೊನ್ನ ಬಣ್ಣವು ನನ್ನ ಚಿತ್ತವನ್ನು ಕದಿಯ ಹೊರಟಿತ್ತು...


                                                                                           ಇತಿ ನಿನ್ನವ,

( ಶಬ್ದ್ - ೨೦೧೨ ನ ಕನ್ನಡ ಸೃಜನಾತ್ಮಕ ಬರವಣಿಗೆಯಲ್ಲಿ ಪ್ರಥಮ ಬಂದಿದ್ದು. ಹ್ಮ್..!! ಸ್ವಲ್ಪ fiction ಸ್ವಲ್ಪ reality.  picture at the bottom- sunset in my native.)


10 comments:

  1. Good one. May I know who is that 'Kannike' ? :)

    ReplyDelete
  2. nice one tilak... de usuage of ur words seems pearl kinda.. :)

    ReplyDelete
    Replies
    1. Thanks dear. Yappa, nothing like that. dey r common words...:)

      Delete
  3. I always wanted to ask if this is real story of your life ????? are you still in contact with that Person if this is in reality ??

    ReplyDelete
    Replies
    1. I tell u d truth. yes it was a real story of my life 8 years ago. We separated 8 years ago only. In this span of time we hardly spoke. Now she is married to some one else n happy n settled down, came to know she has a child too. 2 weeks ago unexpectedly she called n very common talks went on. ha ha ha life moves on alva? I am strictly moved on too.

      Delete
  4. Dear Friend,

    I can remember those days..really touching flashback. At that time It was a fun to us to watch you guys and tried to full your legs..But we can understand your feelings...hearty sorry if we said something wrong...

    All the best for your future...

    ReplyDelete
  5. Ravish, thanks a lot and it is okay, no problem. Now support me by reading my writings.

    ReplyDelete